ಸೋತಿದ್ದರೆ ಅದು ಮೋದಿಯವಲ್ಲ...!
ನಮಗೆ ಅಭ್ಯಾಸವಾಗಿ ಹೋಗಿದೆ…
ಲಕ್ಷ ಕೋಟಿಗಳ ಭ್ರಷ್ಟಾಚಾರ ನಡೆದರೂ ‘ಅದೇನು ಮಹಾ’ ಅನ್ನುವ ಮಟ್ಟಿಗೆ ನಮಗೆ ಅದು ಒಗ್ಗಿ ಹೋಗಿದೆ. ಒಂದೇ ಕುಟುಂಬ ಇನ್ನೂ ನೂರು ವರ್ಷಗಳ ಕಾಲ ನಮ್ಮನ್ನು ಆಳಿದರೂ ನಮಗದು ಮತ್ತೊಂದು ದಾಸ್ಯ ಎಂದೆನಿಸುವುದೇ ಇಲ್ಲ. ಯೋಚನೆ ಮಾಡಿ, ಇವಿಷ್ಟಕ್ಕೆ ಆಗಿದ್ದರೆ ನಮಗೆ ಬ್ರಿಟಿಷರ ಆಳ್ವಿಕೆ ಸಾಕಿತ್ತು, ಅವರೇ ಲೂಟಿ ಮಾಡುತ್ತಿದ್ದರಲ್ಲ. ಇನ್ನು ನಮಗೆ ವಂಶಾಡಳಿತವೇ ಹಿತವೆನಿಸುವುದಾದರೆ ಹಿಂದೆ ನಮ್ಮ ದೇಶದಲ್ಲಿ ಅದೆಷ್ಟು ರಾಜವಂಶಗಳಿರಲಿಲ್ಲ.
ಈ ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವ ಇದೆಲ್ಲ ಯಾಕೆ ಬೇಕಿತ್ತು? ಗಮನಿಸಿ, ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದಾಗಿನಿಂದ ಅದ್ಯಾಕೋ ಸಾಕಷ್ಟು ಜನರ ಹೊಟ್ಟೆ ತೊಳಸಲಾರಂಭಿಸಿದೆ. ಕಾರಣ ಸಾಕಷ್ಟಿದೆ. ಕೆಲವರಿಗೆ ಹಿಂದುತ್ವದ ಪರವಾಗಿದ್ದಾರೆ ಅನ್ನುವ ಕಾರಣ, ಕೆಲವರಿಗೆ ಆರ್.ಎಸ್.ಎಸ್ ಹಿನ್ನೆಲೆಯಿಂದ ಬಂದವರೆಂಬ ಕಾರಣ, ಹಲವರಿಗೆ ಬಿ.ಜೆ.ಪಿ ಪಕ್ಷದವರೆನ್ನುವ ಕಾರಣ, ಮತ್ತೆ ಕೆಲವರಿಗೆ ಚುನಾವಣೆಯಲ್ಲಿ ಅಭೂತಪೂರ್ವ ಅನ್ನುವ ರೀತಿಯಲ್ಲಿ ಗೆದ್ದರೆನ್ನುವ ಮತ್ಸರ ಕಾರಣ, ಇನ್ನಷ್ಟು ಜನರಿಗೆ ಈ ಮನುಷ್ಯ ಹಣಿದಷ್ಟೂ ಮಣಿಯದೆ ಇನ್ನಷ್ಟು ಬೆಳೆಯುತ್ತಿದ್ದಾನಲ್ಲ ಎನ್ನುವ ಹತಾಶೆಯ ಕಾರಣವಿರಬಹುದು.
ಇವೆಲ್ಲ ಒತ್ತಟ್ಟಿಗಿರಲಿ, ಗೆದ್ದ ನಂತರ ಅವರು ಈ ದೇಶದ ಪ್ರಧಾನಿ. ಆರ್.ಎಸ್.ಎಸ್, ಬಿ.ಜೆ.ಪಿ ಅಥವಾ ಹಿಂದೂಗಳಿಗೆ ಮಾತ್ರ ಮೋದಿ ಪ್ರಧಾನಿಯಲ್ಲ. ಅಥವಾ ಎಲ್ಲರಿಗೂ ತಿಳಿದ ಹಾಗೆ ಮೋದಿಯವರಾದರೂ ಎಂದೂ ಇಂಥ ತಾರತಮ್ಯದ ಧೋರಣೆ ತಾಳಲಿಲ್ಲ. ಚುನಾವಣೆಗೂ ಮುನ್ನ ರಾಮಮಂದಿರದಂಥ ವಿಷಯಗಳ ಜಪ ಮಾಡುತ್ತಿದ್ದ ಬಿ.ಜೆ.ಪಿ ಅಭಿವೃದ್ಧಿ ಮಂತ್ರ ಪಠಿಸುವಂತೆ ಮಾಡಿದವರು ಮೋದಿ. ಗೆದ್ದ ಮೇಲೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಹೋಗುವ ಪ್ರಯತ್ನ ಮಾಡಿದವರು ಮೋದಿ. ಅನಗತ್ಯ ವಿಚಾರಗಳೊಂದಿಗೆ ಮೋದಿಯವರನ್ನು ಹೊಗಳಬೇಕೆನ್ನುವ ಉದ್ದೇಶಗಳೊಂದಿಗೆ ಇದನ್ನೆಲ್ಲ ಬರೆಯುತ್ತಿಲ್ಲ. ಹೇಳಲೇಬೇಕಾದ ಒಂದಷ್ಟು ವಿಚಾರಗಳಿವೆ ಎನ್ನುವ ಕಾರಣಕ್ಕೆ ಈ ಪೀಠಿಕೆಯಷ್ಟೆ.
ಮುಖ್ಯವಾದ ಎರಡು ವಿಚಾರಗಳ ಮೂಲಕ ಇವೊತ್ತು ಕೆಲವರು ಮೋದಿಯವರನ್ನು ಬಯ್ಯುತ್ತಿದ್ದಾರೆ. ಅದರಲ್ಲಿ ಒಂದು ನೋಟು ನಿಷೇಧ ಹಾಗೂ ಜಿ.ಎಸ್.ಟಿ ಜಾರಿ. ಈ ಎರಡು ವಿಷಯಗಳಿಂದ ಜನರಿಗೆ ತೊಂದರೆಯಾಗಿದೆ ಎನ್ನುವುದನ್ನೇ ದೊಡ್ಡ ಕೂಗೆಬ್ಬಿಸಿ ಮೋದಿಯವರನ್ನು ನಿಂದಿಸುವ ಕೆಲಸ ಮಾಡಲಾಗುತ್ತಿದೆ. ಇಲ್ಲಿ ನಾವು ಮೊದಲಿಗೆ ಅರ್ಥ ಮಾಡಿಕೊಳ್ಳಬೇಕಾದ ಸಣ್ಣ ವಿಚಾರವೊಂದಿದೆ, ಈ ಎರಡೂ ನಿರ್ಧಾರಗಳು ದೇಶಕ್ಕೆ ಮಾರಕವಾದ ವಿಷಯಗಳಲ್ಲ, ಜನರಿಗೆ ಕಷ್ಟಕೊಡಬೇಕೆನ್ನುವ ಉದ್ದೇಶಗಳಿಂದ ಕೂಡಿರುವಂಥದ್ದಲ್ಲ ಅಥವಾ ದೇಶಕ್ಕೆ ದ್ರೋಹ ಮಾಡುವಂಥದ್ದೂ ಅಲ್ಲ. ಐನೂರು ಹಾಗೂ ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡುವುದರಿಂದ ಕಪ್ಪು ಹಣವನ್ನು ಹೊರಗೆ ತರುವ ಉದ್ದೇಶವಿತ್ತು. ಇದರಿಂದ ಕಪ್ಪು ಹಣ ಹೊಂದಿರುವ ಹೊರತಾಗಿ ಬೇರೆ ಯಾರಿಗೆ ತೊಂದರೆಯಾಗುವುದಕ್ಕೆ ಸಾಧ್ಯ? ಇನ್ನು ಇದರಲ್ಲಿ ಲೋಪವಾಗಿದ್ದರೆ ಹೊಸ ನೋಟನ್ನು ಜನರಿಗೆ ತಲುಪಿಸುವುದರಲ್ಲಿ ಮಾತ್ರ ಅನ್ನುವುದು ನಿಜ. ಜನ ನಾಲ್ಕು ಸಾವಿರ ರೂಪಾಯಿಗಳಿಗಾಗಿ ದಿನಗಟ್ಟಲೇ ಬ್ಯಾಂಕ್ ಹಾಗೂ ಎ.ಟಿ.ಎಂಗಳ ಮುಂದೆ ಸರದಿ ಸಾಲಿನಲ್ಲಿ ನಿಂತು
ಪರಿತಪಿಸುವಂತಾಯಿತು. ದೇಶಕ್ಕೆ ಒಳ್ಳೆಯದಾಗುತ್ತದೆ ಎನ್ನುವ ಕಾರಣಕ್ಕೆ ಸಾಮಾನ್ಯ ಜನರೂ ಕೂಡ ಪರಿಸ್ಥಿತಿಯನ್ನು ಸಹಿಸಿಕೊಂಡರು. ಆದರೂ ನಿರೀಕ್ಷೆಗಿಂತಲೂ ಹೆಚ್ಚೇ ತೊಂದರೆಯಾಯಿತು. ಯಾಕೆ ತೊಂದರೆಯಾಯಿತು? ಹೊಸ ನೋಟುಗಳು ಜನರನ್ನು ಸಕಾಲದಲ್ಲಿ ತಲುಪದೇ ಇರುವುದಕ್ಕೆ ಕಾರಣವೇನು? ಉತ್ತರ ತುಂಬ ಸರಳ. ಪ್ರಭಾವಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳ ಒಪ್ಪಂದ ಇಡೀ ನೋಟು ನಿಷೇಧದ ಉದ್ದೇಶವನ್ನೇ ಗಾಳಿಗೆ ತೂರಿತು. ಈ ಕಡೆ ಜನ ಎರಡು ಸಾವಿರದ ಎರಡು ಹೊಸ ನೋಟುಗಳಿಗಾಗಿ ಪರದಾಡುತ್ತಿರುವಾಗ ಆ ಕಡೆ ಕತ್ತಲಲ್ಲಿ ಶ್ರೀಮಂತರ ಕೋಟಿ ಕೋಟಿ ಕಪ್ಪು ಹಣ ಬಿಳಿಯಾಗುತ್ತಿತ್ತು.
ಪ್ರಧಾನಿ ಮೋದಿಯವರು ಬೇರೆಲ್ಲ ವಿಚಾರಗಳಲ್ಲೂ ತುಂಬ ರಹಸ್ಯ ಕಾಪಾಡಿಕೊಂಡು, ಬೇಕಾದ ಸಿದ್ಧತೆ ಮಾಡಿಕೊಂಡು ಕಳೆದ ವರ್ಷ ನವಂಬರ್ ಎಂಟನೇ ತಾರೀಕಿನ ರಾತ್ರಿ ನೋಟು ನಿಷೇಧದ ಬಗ್ಗೆ ಭಾಷಣ ಮಾಡಿದಾಗ ಇಡೀ ದೇಶ ಅಚ್ಚರಿಗೊಂಡಿತ್ತು. ಯಾಕೆಂದರೆ ಇಂಥ ಒಂದು ನಿರ್ಧಾರ ತೆಗೆದುಕೊಳ್ಳುವುದು ಯಾವ ನಾಯಕನಿಗೂ ಅಷ್ಟು ಸುಲಭವಲ್ಲ. ಭ್ರಷ್ಟರು, ಕಪ್ಪು ಹಣದ ಖಜಾನೆ ಹೊಂದಿರುವವರು ಎಲ್ಲ ಪಕ್ಷದಲ್ಲಿರುವ ಹಾಗೆ ಬಿ.ಜೆ.ಪಿಯಲ್ಲೂ ಇದ್ದರು. ಇದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಡುವ ಕೆಲಸವಾಗಿರಲಿಲ್ಲ. ಹಾಗೂ ರಹಸ್ಯ ಕಾಪಾಡಿಕೊಳ್ಳುವುದೂ ಅಷ್ಟು ಸುಲಭವಲ್ಲ.
ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡಿದ್ದ ಮೋದಿಯವರು ಕಣ್ಮುಚ್ಚಿಕೊಂಡು ನಂಬಿದ್ದು ತುಂಬ ಸಭ್ಯ ವರ್ಗವೆಂದುಕೊಂಡಿದ್ದ ಬ್ಯಾಂಕಿನ ಅಧಿಕಾರಿಗಳನ್ನು ಮಾತ್ರ. ಆದರೆ ಅಲ್ಲಿನ ಕೆಲವು ದೇಶದ್ರೋಹಿ ಅಧಿಕಾರಿಗಳು ಜನರಿಗೆ ತಲುಪಬೇಕಾಗಿದ್ದ ಹೊಸ ನೋಟುಗಳನ್ನು ಪ್ರಭಾವಿ ವ್ಯಕ್ತಿಗಳಿಗೆ ತಲುಪಿಸಿ ಹಳೆಯ ನೋಟುಗಳನ್ನು ಕಮಿಷನ್ ಪಡೆದು ಬದಲಾಯಿಸಿಕೊಂಡರು. ಹಳೆಯ ನೋಟುಗಳನ್ನು ಪರ್ಸಂಟೇಜ್ ಮೂಲಕ ಬದಲಾಯಿಸಿಕೊಳ್ಳುವುದು ದೊಡ್ಡ ದಂಧೆಯಾಗಿಬಿಟ್ಟಿತು. ಪರಿಣಾಮವಾಗಿ ಜನ ಸಾಮಾನ್ಯರು ಪರದಾಡುವಂತಾಯಿತು. ಅಂದರೆ ಒಳ್ಳೆಯ ಉದ್ದೇಶವೊಂದು ಅಯೋಗ್ಯರಿಂದಾಗಿ ಹಾಳಾಗಿ ಹೋಯಿತೆಂದರೆ ಅದು ಮೋದಿಯವರ ವೈಫಲ್ಯ ಹೇಗಾಗುತ್ತದೆ? ಅದು ಮೋದಿಯವರ ಸೋಲು ಹೇಗಾಗುತ್ತದೆ ಎನ್ನುವುದು ನಾವು ಯೋಚಿಸಬೇಕಾದ ಪ್ರಶ್ನೆ..
ತೊಂದರೆಯಾಗಲಿಕ್ಕೆ ಸಾಧ್ಯವಿದೆ? ತೆರಿಗೆ ಮೊದಲೂ ಕಟ್ಟಬೇಕಿತ್ತು, ಕಟ್ಟುತ್ತಿದ್ದರು. ಈಗಲೂ ಕಟ್ಟಬೇಕು, ಕಟ್ಟುತ್ತಿದ್ದಾರೆ. ವಿಶೇಷ ಏನೆಂದರೆ ಜಿ.ಎಸ್.ಟಿ ಅನ್ನುವ ವಿಷಯ ಎಷ್ಟು ಪ್ರಚಾರ ಪಡೆಯಿತೆಂದರೆ ಬಿಲ್ ನಲ್ಲಿ ಎಲ್ಲರೂ ಕಣ್ಣರಳಿಸಿ ಜಿ.ಎಸ್.ಟಿ ಅನ್ನುವುದನ್ನೇ ಗಮನಿಸುವಂತಾಯಿತು. ವಸ್ತುವಿನ ಬೆಲೆಗಿಂತ ನಾವು ಶೇಕಡ ಹದಿನೆಂಟರಷ್ಟು ಹಣವನ್ನು ಹೆಚ್ಚು ಕೊಡುತ್ತಿದ್ದೆವೇನೊ ಎನ್ನುವ ಹಾಗೆ ಭಾವಿಸುವಂತಾಯಿತು.
ಇದೀಗ ಜಿ.ಎಸ್.ಟಿ ಬಗ್ಗೆ ಎಲ್ಲರೂ ಮಾತಾಡುವವರೆ, ಎಲ್ಲರೂ ಆರ್ಥಿಕ ತಜ್ಞರೇ ಆಗಿದ್ದಾರೆ. ಇದರಿಂದ ಏನಂಥ ಅನಾಹುತ ಆಗುವುದಕ್ಕೆ ಸಾಧ್ಯ? ಬೇರೆ ಬೇರೆ ರೀತಿಯ ತೆರಿಗೆಗಳನ್ನೆಲ್ಲ ಸೇರಿಸಿ ಏಕರೂಪದ ತೆರಿಗೆ ಪದ್ಧತಿ ಜಾರಿ ಮಾಡಲಾಗಿದೆ. ನೂರಾರು ದೇಶಗಳಲ್ಲಿ ಈ ಪದ್ಧತಿ ಈಗಾಗಲೇ ಇದೆ, ಮತ್ತು ಯಶಸ್ವಿಯೂ ಆಗಿದೆ. ಈ ನಿಯಮ ಬಂದಿರುವುದರಿಂದ ತೆರಿಗೆ ಕಳ್ಳರಿಗಷ್ಟೇ ತೊಂದರೆಯಾಗಿದೆ. ಬೇರೆ ಯಾರಿಗಾದರೂ ಇದರಿಂದ ಏನು
ಮೋದಿಯವರನ್ನು ವಿರೋಧಿಸುವವರು ಹಾಗೂ ಜಿ.ಎಸ್.ಟಿ ಬಂದಾಗಿನಿಂದ ತೆರಿಗೆ ಕದಿಯುವುದು ಕಷ್ಟವಾಗಿರುವಂಥವರು ಇದರಿಂದ ಇಡೀ ದೇಶದ ಅರ್ಥ ವ್ಯವಸ್ಥೆಯೇ ಹಾಳಾಗಿ ಹೋಯಿತೆನ್ನುವಂತೆ ಬೊಂಬಡಾ ಬಜಾಯಿಸತೊಡಗಿದರು. ಹೌದು, ಈ ಆರ್ಥಿಕ ಸುಧಾರಣೆಯಿಂದ ತೆರಿಗೆ ಕಳ್ಳತನ ಮಾಡುವವರಿಗೆ ಕಷ್ಟವಾಗಿರಬಹುದು, ಭ್ರಷ್ಟಾಚಾರ ಮಾಡುವವರು ಇಕ್ಕಟ್ಟಿಗೆ ಸಿಕ್ಕಿ ಹಾಕಿಕೊಂಡಿರಬಹುದು. ಇವರ್ಯಾರೂ ನಮಗೆ ತೊಂದರೆಯಾಗಿದೆಯೆಂದು ನೇರವಾಗಿ ಹೇಳಿಕೊಳ್ಳಲಾಗದೆ ಜನ ಸಾಮಾನ್ಯರಿಗೆ ಕಷ್ಟವಾಗಿದೆ, ಬಡವರಿಗೆ ತೊಂದರೆಯಾಗಿದೆ ಎಂದು ಇನ್ನ್ಯಾರದೋ ಹೆಸರು ಹೇಳಿ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಸಲಿಗೆ ಇವರ ಬುಡಕ್ಕೆ ಬೆಂಕಿ ಬಿದ್ದ ಪರಿಣಾಮವೇ ಈ ಎಲ್ಲ ಥರದ ಹತಾಶೆಯ ಹಾರಾಟಗಳು..
ಇನ್ನು ತೆರಿಗೆ ಲೆಕ್ಕಾಚಾರಗಳು ಒಂದೊಂದು ಮಿತಿಗೆ, ಒಂದೊಂದು ವಸ್ತುವಿಗೆ, ಒಂದೊಂದು ವರ್ಷದ ಬಜೆಟ್ ಗೆ ಅನುಗುಣವಾಗಿ ವ್ಯತ್ಯಾಸಗಳಾಗುತ್ತಲೇ ಇರುತ್ತವೆ. ತಲೆ ಕೆಡಿಸಿಕೊಂಡರೆ ಕ್ಲಿಷ್ಟವೂ ಹೌದು, ತುಂಬ ಚಿಂತಿಸದೆ ಸರ್ಕಾರಕ್ಕೆ ಸೇರಬೇಕಾಗಿರುವುದನ್ನು ಕೊಟ್ಟರೆ ಸುಲಭವೂ ಹೌದು. ಬಹುತೇಕ ಆರ್ಥಿಕ ತಜ್ಞರು ಹಾಗೂ ಜನ ಸಾಮಾನ್ಯರು ಹೇಳುವ ಹಾಗೆ ನೋಟು ನಿಷೇಧ ಹಾಗೂ ಜಿ.ಎಸ್.ಟಿ ಯಿಂದ ಅಂಥ ವ್ಯತ್ಯಾಸವೇನೂ ಆಗಿಲ್ಲ. ಏನೋ ಆಗಿ ಹೋಯಿತು ಎನ್ನುವಂತೆ ಬಿಂಬಿಸಲಾಗಿದ್ದೇ ಹೆಚ್ಚು. ನಿಜ, ಮೊದಲಿನಷ್ಟು ಸಲೀಸಾಗಿ ದುಡ್ಡು ಓಡಾಡುವುದಿಲ್ಲ,
ಕೆಲಸ ಕಾರ್ಯಗಳಿಗೆ ಕಷ್ಟವಾಗಿದೆ ಎನ್ನುವ ಮಾತಿದೆ. ಸೈಟು, ಮನೆ, ಅಪಾರ್ಟ್ ಮೆಂಟ್ ಗಳು ಬಿಕರಿಯಾಗುತ್ತಿಲ್ಲ ಅನ್ನುವಂಥ ಕಾರಣಗಳನ್ನು ಕೊಡುತ್ತಾರೆ. ಯೋಚನೆ ಮಾಡಿ, ಮೊದಲು ಕೇವಲ ಕಪ್ಪು ಹಣದಿಂದಲೇ ಎಲ್ಲಾದರಲ್ಲೂ ಒಂದು ಧಾರಾಳತೆ ಬಂದಿತ್ತು. ಈಗ ಕಪ್ಪು ಹಣ ಮೊದಲಿನಷ್ಟು ಸುಲಭವಾಗಿ ಕೈ ಬದಲಾಗಲು ಸಾಧ್ಯವಿಲ್ಲ. ಹಾಗಾಗಿ ಎಷ್ಟೋ ವ್ಯವಹಾರಗಳು ಕುಂಠಿತವಾಗಿವೆ. ಇದು ಸಹಜವೆ, ಗಂಡ ಕಳ್ಖತನ ಮಾಡುವಾಗ ಮನೆ ಚೆನ್ನಾಗಿ ನಡೆಯುತ್ತಿತ್ತು, ಈಗ ಕಳ್ಳತನ ಬಿಟ್ಟ ಮೇಲೆ ಮನೆ ನಡೆಸುವುದು ಕಷ್ಟವಾಗಿದೆ ಅಂತ ಹೆಂಡತಿ ಹೇಳಿದಂತಾಗಿದೆ ಇವರ ಕತೆ. ಮತ್ತೆ ಕೆಲವರು ಪ್ರತಿಯೊಂದಕ್ಕೂ ರೀಯಲ್ ಎಸ್ಟೇಟ್ ಉದ್ಯಮವನ್ನೇ ಹೋಲಿಸಿ ಮಾತಾಡುತ್ತಾರೆ. ರೀಯಲ್ ಎಸ್ಟೇಟ್ ಬಿದ್ದು ಹೋಯಿತೆಂದರೆ ಎಲ್ಲ ವ್ಯವಹಾರಗಳು ಬಿದ್ದು ಹೋಯಿತೆನ್ನುವ ಮಟ್ಟಿಗೆ ಹುಯಿಲೆಬ್ಬಿಸುವ ಪರಿಪಾಠವೊಂದಿದೆ.
ಭೂಮಿಯ ಬೆಲೆ ಹಣದ ವಿಚಾರದಲ್ಲಿ ಕುಸಿದರೆ ಒಳ್ಳೆಯದೇ, ಭೂಮಿ ಬೆಲೆ ಆಕಾಶಕ್ಕೇರಲೇಬಾರದು. ನೆಲದ ಮಾರಾಟ ಅಂದರೆ ಅದು ನೆಲಮೂಲದ ಸಂಸ್ಕೃತಿಯ ಮಾರಾಟವೂ ಹೌದು. ಕಪ್ಪು ಹಣ ಕಡಿಮೆಯಾದರೆ ಭೂವ್ಯವಹಾರದ ಹಾದರವೂ ಒಂದಿಷ್ಟು ಕಡಿಮೆಯಾದೀತು, ಒಳ್ಳೆಯದೆ. ಇದು ಭೂಮಿ ಹೊಂದುವವರ ಕನಸಿಗೆ ಪೂರಕವಾದ ಅಂಶವೇ ಹೊರತು ಕೆಟ್ಟದ್ದೇನಲ್ಲ.
ಇದೆಲ್ಲದರ ಹೊರತಾಗಿಯೂ ಮೋದಿ ಸರ್ಕಾರದ ಮೊದಲ ಅವಧಿಯ ಈ ಎರಡೂ ಆರ್ಥಿಕ ಸುಧಾರಣೆಗಳಿಂದ ಒಂದಷ್ಟು ಸಹಜ ಏರುಪೇರುಗಳಾಗಿವೆ ಅನ್ನುವುದೂ ನಿಜ. ನೂರಾರು ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಇಷ್ಟು ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಾಗ ಮತ್ತೆ ಸಹಜ ಸ್ಥಿತಿಗೆ ಬರುವುದಕ್ಕೆ ಸಮಯ ಹಿಡಿಯುತ್ತದೆ. ಆದರೆ ದೇಶದ ಎಲ್ಲ ಸಮಸ್ಯೆಗಳಿಗೆ ಈ ಎರಡು ನಿರ್ಧಾರಗಳೇ ಕಾರಣವೆನ್ನುವುದು ಮಾತ್ರ ಮೂರ್ಖತನವಾಗುತ್ತದೆ. ಇದಲ್ಲದೆಯೂ ಜನ ನೂರಾರು ಬೇರೆಬೇರೆ ಸಮಸ್ಯೆಗಳಿಂದ ಬಳಲುತ್ತಲೇ ಇದ್ದಾರೆ. ಸರ್ಕಾರದ ಇಂಥ ದಿಟ್ಟತನದ ಕಾರ್ಯಕ್ರಮಗಳು ನಿಧಾನವಾಗಿ ಅಂಥ ಬೇರೆ ಇನ್ನೆಷ್ಟೋ ಸಮಸ್ಯೆಗಳನ್ನು ಬಗೆಹರಿಸುತ್ತದೆನ್ನುವ ಗುಣಾತ್ಮಕ ಯೋಚನೆ ನಮ್ಮಲ್ಲಿರಬೇಕು. ಇಂಜೆಕ್ಷನ್ ಚುಚ್ಚಿದಾಗ ಆಗುವ ನೋವನ್ನೇ ದೊಡ್ಡದೆಂದು ಬೊಬ್ಬೆ ಹೊಡೆಯುತ್ತ ಕುಳಿತರೆ ಕಾಯಿಲೆ ವಾಸಿಯಾಗುವುದು ಹೇಗೆ? ಇಷ್ಟಕ್ಕೂ ಅಸಲಿ ಸಮಸ್ಯೆ ನೋಟ್ ಬ್ಯಾನೂ ಅಲ್ಲ, ಜಿ.ಎಸ್.ಟಿಯೂ ಅಲ್ಲ.
ಮೋದಿ ಅಥವಾ ಮೋದಿ ಸರ್ಕಾರದ ವಿರುದ್ಧವಾಗಿ ಮಾತಾಡಲು ಬೇರಿನ್ನೇನೂ ಇವರಿಗೆ ಸಿಗದಿರುವುದೇ ಇಷ್ಟಕ್ಕೆಲ್ಲ ಕಾರಣ. ಸುಮ್ಮನೆ ಯೋಚಿಸಿ, ಮೋದಿ ಸರ್ಕಾರದಲ್ಲಿ ಬೋಫೋರ್ಸ್ ಹಗರಣ ನಡೆದಿದ್ದರೆ, ಲಕ್ಷಾಂತರ ಕೋಟಿಯ ಟುಜಿ ಸ್ಪೆಕ್ಟ್ರಮ್ ಭ್ರಷ್ಟಾಚಾರ ಆಗಿದ್ದರೆ, ಸಾವಿರಾರು ಕೋಟಿಗಳ ಕಲ್ಲಿದ್ದಲು ಅವ್ಯವಹಾರ ನಡೆದಿದ್ದರೆ, ನೂರಾರು ಕೋಟಿಗಳ ಕಾಮನ್ ವೆಲ್ತ್ ಪ್ರಕರಣ ಆಗಿದ್ದರೆ, ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿಯಂಥ ಲೂಟಿ ಆಗಿದ್ದರೆ ಈ ನೋಟ್ ಬ್ಯಾನ್ ಹಾಗೂ ಜಿ.ಎಸ್.ಟಿ ವಿಚಾರಗಳು ಎಷ್ಟು ಚಿಲ್ಲರೆಯಾಗಿ ಹೋಗಿರುತ್ತಿತ್ತು ಎಂದು ಊಹಿಸಿ. ಅಂದರೆ ತುಂಬಾ ಜನಕ್ಕೆ ಬೇಕಾಗಿರುವುದು ದೇಶಕ್ಕೆ ಒಳ್ಳೆಯದಾಗುವುದಲ್ಲ, ಮೋದಿ ಯಶಸ್ಸು ಕಾಣಬಾರದೆನ್ನುವುದು.
ಕೆಲವರಲ್ಲಂತೂ ಒಂದು ವಿಕೃತಿಯೇ ಬೆಳೆದು ಬಿಟ್ಟಿದೆ. ದೇಶ ಹಾಳಾದರೂ ಪರವಾಗಿಲ್ಲ, ಮೋದಿ ಮಾಡುವ ಯೋಜನೆಗಳು ಯಶಸ್ವಿಯಾಗಬಾರದು ಎನ್ನುವ ವಿಕೃತ ಮನಸ್ಥಿತಿ ಕಾಣುತ್ತಿದೆ. ಇದಕ್ಕಾಗಿ ದೇಶದ್ರೋಹಿಗಳನ್ನು, ಭಯೋತ್ಪಾದಕರನ್ನು, ಶತ್ರುರಾಷ್ಟ್ರವನ್ನು ಓಲೈಸುವುದಾದರೂ ಸರಿ, ಮೋದಿ ಸೋಲಬೇಕೆನ್ನುವ ಹತಾಶೆಯ ಹಂತವನ್ನೂ ತಲುಪಿದ್ದಾರೆ. ಅರ್ಥವಾಗದ ವಿಷಯವೆಂದರೆ ಪ್ರಧಾನಿ ಮೋದಿಯೆಂದರೆ ಇವರಿಗೆಲ್ಲ ಯಾಕಿಷ್ಟು ದ್ವೇಷ ಎನ್ನುವುದು. ಕೇಂದ್ರದಲ್ಲಿ ಮೋದಿ ಸರ್ಕಾರ ಬರುವುದಕ್ಕೂ ಮುಂಚೆ ಸುಖ, ಸಮೃದ್ಧಿಯ ರಾಮರಾಜ್ಯ ನಡೆಯುತ್ತಿತ್ತೆ? ರಸ್ತೆ ಬದಿಗಳಲ್ಲಿ ಚಿನ್ನ ಬೆಳ್ಳಿಯನ್ನು ಸೇರುಗಳಲ್ಲಿ ಅಳೆದು ಮಾರಾಟ ಮಾಡುತ್ತಿದ್ದರೆ? ಇದಕ್ಕೂ ಮುನ್ನ ಜಗತ್ತಿನ ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿತ್ತೆ? ಹಸಿವು, ಬಡತನಗಳಿಲ್ಲದ ಸ್ವಚ್ಛ ಭಾರತದಲ್ಲಿ ತುಂಬ ಆನಂದವಾಗಿ ಬದುಕುತ್ತಿದ್ದರಾ?
ಎಲ್ಲೆಲ್ಲೂ ಸಮಾನತೆ, ನ್ಯಾಯ, ನೀತಿ ತುಂಬಿ ತುಳುಕುತ್ತಿತ್ತೆ? ಈಗ ಇದೆಲ್ಲ ಏಕಾಏಕಿ ಹಾಳಾಗಿ ಹೋಯಿತೆ? ಮೋದಿಯವರು ಅಧಿಕಾರಕ್ಕೆ ಬಂದ ನಂತರ ಇವರೆಲ್ಲ ಏನನ್ನು ಕಳೆದುಕೊಂಡಿದ್ದಾರೆಂದು ಈ ಪರಿ ಕುಣಿಯುತ್ತಿದ್ದಾರೋ ತಿಳಿಯುತ್ತಿಲ್ಲ.
ಹೋಗಲಿ, ಮೋದಿಯವರು ಬೇಡವೆಂದೇ ಅಂದುಕೊಳ್ಳೋಣ. ಸದ್ಯದ ಪರಿಸ್ಥಿತಿಯಲ್ಲಿ ಇಷ್ಟು ಸಮರ್ಥವಾಗಿ ದೇಶ ನಡೆಸುವ ಮತ್ತೊಬ್ಬ ನಾಯಕ ಯಾರಿದ್ದಾರೆ? ಮೋದಿಯಿಂದ ಅಧಿಕಾರ ಕಿತ್ತುಕೊಂಡು ಯಾರ ಕೈಗೆ ಕೊಡುತ್ತೀರಿ? ಹೋಗಲಿ, ಮೋದಿಯವರೇ ಇನ್ನೂ ನೂರು ವರ್ಷ ಕಾಲ ಈ ದೇಶದ ನಾಯಕರಾಗಿರುತ್ತಾರಾ? ಮುಂದೆ ಇವರ ಮಕ್ಕಳು ಮೊಮ್ಮಕ್ಕಳು ಅಧಿಕಾರಕ್ಕೆ ಬರುತ್ತಾರಾ? ಯಾಕಿಷ್ಟು ಆತಂಕ ಇವರಿಗೆಲ್ಲ? ಮೋದಿಯವರಂಥ ನಾಯಕ ಯಾವ ಪಕ್ಷದಲ್ಲಿದ್ದರೂ ಒಪ್ಪಿಕೊಂಡು ಬಿಡಬಹುದೆನ್ನುವ ಸಣ್ಣ ಹೃದಯವಂತಿಕೆ ಯಾಕಿಲ್ಲ? ಈ ನೆಲಕ್ಕೆ ಗೌರವ ಕೊಟ್ಟರೆ ತಪ್ಪಾ? ದೇಶವನ್ನು ಭಕ್ತಿಯಿಂದ ನಮಿಸಿದರೆ ತಪ್ಪಾ? ನಾವು ಹುಟ್ಟಿದ ಧರ್ಮವನ್ನು ಇನ್ನೊಬ್ಬರಿಗೆ ತೊಂದರೆಯಾಗದಂತೆ ಅನುಸರಿಸಿ ಬದುಕಿದರೆ ತಪ್ಪಾ? ಇದನ್ನೆಲ್ಲ ಧಿಕ್ಕರಿಸಿದರೆ ಮಾತ್ರವೇ ಚಿಂತಕರಾ? ಇದನ್ನೆಲ್ಲ ಟೀಕಿಸಿದರೆ ಮಾತ್ರ ಬುದ್ಧಿಜೀವಿಗಳಾ? ಸ್ವಲ್ಪ ಸಮಾಧಾನವಾಗಿ, ಪೂರ್ವಗ್ರಹಗಳಿಲ್ಲದೆ ಯಾಕೆ ಯೋಚಿಸಬಾರದು?
ಹೋಗಲಿ, ಇಷ್ಟು ವರ್ಷಗಳ ಮೇಲಾದರೂ ಎಲ್ಲರೂ, ಎಲ್ಲಾದಕ್ಕೂ ಪ್ರಶ್ನೆ ಮಾಡುವಂಥ ಒಬ್ಬ ನಾಯಕ ಸಿಕ್ಕಿದ್ದಾನಲ್ಲ, ಖುಷಿಪಡೋಣ ಬಿಡಿ. ಮೋದಿಯೇ ಆಗಲಿ ಯಾರೇ ಆಗಲಿ ಪ್ರಜಾಪ್ರಭುತ್ವದಲ್ಲಿ ಪ್ರಶ್ನಾತೀತರೇನಲ್ಲ. ಆದರೆ ಯಾರನ್ನು ಯಾವ ಕಾರಣಕ್ಕೆ ಕೇಳಬೇಕು ಎನ್ನುವ ಪ್ರಜ್ಞೆ ನಮಗಿರಬೇಕು. ದ್ವೇಷ ಅಥವಾ ಟೀಕೆ ಉದ್ದೇಶವಾಗಬಾರದು. ಪ್ರತಿಯೊಂದಕ್ಕೂ ಟೀಕೆ ಮಾಡುವಷ್ಟು ಟೊಳ್ಳು ವ್ಯಕ್ತಿತ್ವವಾಗಿದ್ದರೆ ಇಡೀ ಜಗತ್ತು ಆ ವ್ಯಕ್ತಿಯನ್ನು ಒಪ್ಪಿಕೊಳ್ಳುತ್ತಿತ್ತೇ? ವಿದೇಶಗಳಲ್ಲಿ ತಲೆಗೆ ಐನೂರು ರೂಪಾಯಿ ಕೊಟ್ಟು ಲಾರಿಗಳಲ್ಲಿ ಜನ ತುಂಬಿಸಿಕೊಂಡು ಬರುವುದು ಸಾಧ್ಯವಿಲ್ಲ ಅಲ್ಲವೇ?

ಅರ್ಥ ಮಾಡಿಕೊಳ್ಳಬೇಕಾದ ಸತ್ಯ ಇಷ್ಟೇ, ಅಯೋಗ್ಯರಿಂದ ಹಾಳಾದ ಒಳ್ಳೆ ಯೋಜನೆಗಳನ್ನು ಮೋದಿಯ ವೈಫಲ್ಯ ಅಥವಾ ತಪ್ಪು ನಿರ್ಧಾರವೆಂದು ಭಾವಿಸಿದರೆ ಅದು ಕೊನೆಗೆ ನಮ್ಮದೇ ಸೋಲಾಗುತ್ತದೆ. ಇಂಥ ಕಾರ್ಯಕ್ರಮಗಳು ಸೋತರೆ ಉಳಿಸಿಕೊಳ್ಳುವ ಯೋಗ್ಯತೆ ನಮಗೆಷ್ಟಿತ್ತು ಎನ್ನುವ ಮಾನದಂಡದಿಂದ ಅಳೆಯಬೇಕೇ ಹೊರತು ಮೋದಿಯನ್ನಲ್ಲ.
ಮೋದಿ ಶ್ರೀಮಂತರ ಪರವಾಗಿದ್ದಿದ್ದರೆ ನೋಟು ನಿಷೇಧವನ್ನು ಮಾಡಬೇಕಾಗಿರಲಿಲ್ಲ, ಜಿ,ಎಸ್.ಟಿಯೂ ಜಾರಿಯಾಗ್ತಾ ಇರಲಿಲ್ಲ. ಒಂದಂತೂ ನಿಜ, ಕೃಷಿಯ ಜೊತೆಗೆ ಕೈಗಾರಿಕೆ ಬೆಳೆಯದೆ ಯಾವ ದೇಶವೂ ಉದ್ಧಾರವಾಗಿಲ್ಲ. ಜನವಿರೋಧಿ ನಿರ್ಧಾರಗಳು ಬಂದಾಗ ಯಾರೇ ಆದರೂ ವಿರೋಧಿಸೋಣ. ಇಷ್ಟೆಲ್ಲ ವಿರೋಧಗಳ ನಡುವೆಯೂ ಒಬ್ಬ ವ್ಯಕ್ತಿ ದಿನದಲ್ಲಿ ಹದಿನೆಂಟಿಪ್ಪತ್ತು ಗಂಟೆಗಳ ಕಾಲ ದಣಿವರಿಯದೆ ದುಡಿಯುತ್ತಾನೆಂದರೆ ಒಂದಷ್ಟು ಕಾದು ನೋಡುವುದಕ್ಕೇನು? ಒಬ್ಬ ಪ್ರಜೆಯಾಗಿ ಸರಿ ಅನ್ನಿಸಿದಾಗ ನನ್ನ ಪ್ರಧಾನಿ ಎಂದು ಪರವಾಗಿ ನಿಲ್ಲುವುದು ಹೇಗೆ ತಪ್ಪಾಗುತ್ತದೆ..?