ಯಶಸ್ವಿ ಮೂರು ವರ್ಷ ಪೂರೈಸಿದ ನರೇಂದ್ರ ಮೋದಿ ಸರ್ಕಾರ..

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೇರಿ ಮೂರು ವರ್ಷಗಳಾಯಿತು. ಈ ಸಂದರ್ಭದಲ್ಲಿ ಲೋಕಲ್‍ಸರ್ಕಲ್ಸ್  ನಡೆಸಿದ ಸಮೀಕ್ಷೆಯಲ್ಲಿ  ಮೋದಿ ಸರ್ಕಾರದ ಬಗ್ಗೆ ಜನರ ಅಭಿಪ್ರಾಯ ವ್ಯಕ್ತವಾಗಿದೆ.
ಸಮೀಕ್ಷೆಯ ಪ್ರಕಾರ ಶೇ.61 ಜನರು ಮೋದಿ ತಮ್ಮ ನಿರೀಕ್ಷೆಗಳನ್ನು ಸಾಕಾರಗೊಳಿಸಿದ್ದಾರೆ ಎಂದಿದ್ದಾರೆ. ಅದೇ ವೇಳೆ ಶೇ.59 ರಷ್ಟು ಮಂದಿ ಮೋದಿ ಸರ್ಕಾರ ಚುನಾವಣಾ ಪೂರ್ವ ಭರವಸೆಗಳನ್ನು ಈಡೇರಿಸುವ ಹಾದಿಯಲ್ಲಿದೆ ಎಂದು ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಭಾರತದ ಘನತೆ ಮತ್ತು ಪ್ರಭಾವ ಹೆಚ್ಚಾಗಿದೆಯೇ ಎಂಬ ಪ್ರಶ್ನೆಗೆ  ಶೇ.81 ಮಂದಿ ಹೌದು ಎಂದು ಉತ್ತರಿಸಿದ್ದಾರೆ.

ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡುವ ಮೂಲಕ ಕಪ್ಪು ಹಣವನ್ನು ನಿಯಂತ್ರಿಸಲಾಗಿದೆ ಎಂಬ ಅಭಿಪ್ರಾಯಕ್ಕೆ ಶೇ. 51 ಜನರು ಹೌದು ಎಂದಿದ್ದಾರೆ. ಅದೇ ವೇಳೆ ಶೇ.37 ಮಂದಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡುವುದರಿಂದ ಭ್ರಷ್ಟಾಚಾರ ಕಡಿಮೆಯಾಗಿಲ್ಲ ಎಂದಿದ್ದಾರೆ.

ವಿದೇಶ ನೀತಿ, ಪಾಕಿಸ್ತಾನದೊಂದಿಗಿನ ಸಂಬಂಧ, ಜಾತೀಯತೆ, ಮೂಲ ಸೌಕರ್ಯಗಳ ಅಭಿವೃದ್ಧಿ ಹಾಗೂ ಸರ್ಕಾರದ ನೀತಿಗಳ ಬಗ್ಗೆ ಬಹುತೇಕ ಮಂದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಆನ್‍ಲೈನ್‍ನಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ ದೇಶದ 200 ನಗರಗಳ 40.000ಕ್ಕಿಂತಲೂ ಹೆಚ್ಚು ಜನರು ಭಾಗಿಯಾಗಿದ್ದಾರೆ.
ಮೋದಿಯವರ ಸರ್ಕಾರ ಹೆಚ್ಚಿನ ಉದ್ಯೋಗವಕಾಶಗಳನ್ನು ಸೃಷ್ಟಿಸಿಲ್ಲ, ಹಣದುಬ್ಬರದಲ್ಲಿ ಸಮಸ್ಥಿತಿ ಕಾಯ್ದುಕೊಂಡಿಲ್ಲ, ಆರೋಗ್ಯ ವಲಯದಲ್ಲಿ ಸುಧಾರಣೆ ತಂದಿಲ್ಲ, ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ಅಪರಾಧಗಳನ್ನು ತಡೆಯಲು ವಿಫಲವಾಗಿದೆ ಎಂದು ಜನರು ಟೀಕಿಸಿದ್ದಾರೆ.

ಸರ್ಕಾರದ ಯೋಜನೆಗಳ ಬಗ್ಗೆ ಸಮೀಕ್ಷೆ ಮೂಲಕ ಅಭಿಪ್ರಾಯ ಕೇಳಿದಾಗ ನೇರ ನಗದು ವರ್ಗಾವಣೆ ವ್ಯವಸ್ಥೆ(ಡಿಬಿಟಿ) ಬಗ್ಗೆ ಶೇ.57 ರಷ್ಟು ಜನರು ಮೆಚ್ಚುಗೆ ಸೂಚಿಸಿದ್ದು. ಮೇಕ್ ಇನ್ ಇಂಡಿಯಾ ಯೋಜನೆ ಬಗ್ಗೆ ಶೇ.8ರಷ್ಟು ಜನರು ಮಾತ್ರ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಮೋದಿಯವರ ಸ್ವಚ್ಛ ಭಾರತ ಅಭಿಯಾನವೂ ವಿಫಲವಾಗಿದೆ. ಈ ಅಭಿಯಾನದಿಂದ ತಮ್ಮ ನಗರ ಸ್ವಚ್ಛವಾಗಿದೆಯೇ ಎಂದು ಕೇಳಿದಾಗ ಶೇ. 57ರಷ್ಟು ಮಂದಿ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

No comments:

Post a Comment

Featured Post

ಪ್ರಿಯಾಂಕ ಗಾಂಧಿಗೆ ಕರ್ನಾಟಕ ಚುನಾವಣಾ ಜವಾಬ್ದಾರಿ...!

ಮುಂದಿನ ವರ್ಷ ಕರ್ನಾಟಕ, ರಾಜಸ್ಥಾನದಲ್ಲಿ ಚುನಾವಣೆ ನಡೆಯಲಿದ್ದು, ಈ ಎರಡು ರಾಜ್ಯಗಳ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಮಹತ್ವವಾಗಿದೆ. ಚುನಾವಣೆಯಲ್ಲಿ ಗೆಲುವು ಪಡೆಯುವ ದೃ...